ಎಚ್ ಎಮ್ ಎಮ್ ನಲ್ಲಿ ವಿದ್ಯಾರ್ಥಿ ಸಂಸತ್ ಗೆ ಚುನಾವಣೆ - June 22, 2023

ಬಿ ಎಮ್ ಸುಕುಮಾರ ಶೆಟ್ಟಿ ಅಧ್ಯಕ್ಷತೆಯ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 22.06.2023 ರಂದು ಶಾಲಾ ಸಂಸತ್ತಿಗೆ ವಿದ್ಯಾರ್ಥಿ ನಾಯಕರ ಆಯ್ಕೆಗಾಗಿ ಚುನಾವಣೆ ನಡೆಯಿತು. ಚುನಾವಣೆಯ ಪ್ರತಿಯೊಂದು ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ನೈಜ ಚುನಾವಣಾ ಮಾದರಿಯಲ್ಲಿಯೇ ಆರಂಭವಾದ ಈ ಚುನಾವಣಾ ಪ್ರಕ್ರಿಯೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ, ಚಿಹ್ನೆಗಳ ವಿತರಣೆ, ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಹೀಗೆ ಅನೇಕ ಹಂತಗಳನ್ನು ಒಳಗೊಂಡಿತ್ತು. ಬೆರಳಿಗೆ ಶಾಯಿ ಹಾಕಿಸಿಕೊಂಡ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಮತ್ತು ಜವಾಬ್ದಾರಿಯನ್ನು ಅರಿತು ತಮ್ಮ ಅಮೂಲ್ಯವಾದ ಮತವನ್ನು ತಮ್ಮ ನೆಚ್ಚಿನ ಅಭ್ಯರ್ಥಿಗೆ ನೀಡುವುದರ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಇವಿಎಂ ಮಾದರಿಯ ಟ್ಯಾಬ್ ಮೂಲಕ ವಿದ್ಯಾರ್ಥಿಗಳು ಕಾಗದರಹಿತ ಮತದಾನ ನಡೆಸಿ ನೈಜ ಚುನಾವಣೆಯ ಅನುಭವ ಪಡೆದರು.

ಮಧ್ಯಾಹ್ನದ ವೇಳೆ ಅಭ್ಯರ್ಥಿಗಳ ಸಮಕ್ಷಮದಲ್ಲಿ ನಡೆದ ಮೂರು ಸುತ್ತಿನ ಮತ ಎಣಿಕೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಬ್ರಾಹ್ಮಿ ಸಿ ಎಮ್ ಮತ್ತು ಸಹಾಯಕ ವಿದ್ಯಾರ್ಥಿ ನಾಯಕಿಯಾಗಿ ಅವನಿ ಎ ಶೆಟ್ಟಿಗಾರ್ ಆಯ್ಕೆಯಾದರು. ವಿಜೇತರನ್ನು ಸಂಸ್ಥೆಯ ಸಂಚಾಲಕರು, ಅಧ್ಯಕ್ಷರು ಆದ ಬಿ. ಎಮ್ ಸುಕುಮಾರ ಶೆಟ್ಟಿ ಅಭಿನಂದಿಸಿದರು. ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ಚುನಾವಣಾ ಸಿಬ್ಬಂದಿಗಳು ಮತ್ತು ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ವಿದ್ಯಾರ್ಥಿ ಚುನಾವಣೆ ಸಂಪನ್ನಗೊಂಡಿತು.


45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved