ಮನುಷ್ಯನ ದೇಹಕ್ಕೆ ಬೆನ್ನುಮೂಳೆ ಹೇಗೆ ಆಧಾರವೋ, ಅದೇ ರೀತಿ ಸದೃಢ ಸಮಾಜ ನಿರ್ಮಾಣಕ್ಕೆ ಉತ್ತಮ ನಾಯಕತ್ವ ಅವಶ್ಯಕ. ಇಂತಹ ನಾಯಕತ್ವ ಗುಣವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ವಿರೋಧ ಪಕ್ಷದವರು ಆಡಳಿತ ಪಕ್ಷದ ಕಾರ್ಯಕ್ಕೆ ಸೂಕ್ತ ಬೆಂಬಲ ನೀಡಿದರೆ ಶಾಲಾ ಸಂಸತ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ನಾಡಾ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪರವರು ಹೇಳಿದರು. ಅವರು ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಭೆಯಲ್ಲಿ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಬಿ. ವಿ. ಜಯಸೂರ್ಯ, ಉಪನಾಯಕನಾಗಿ ಶ್ರವಣ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಬ್ರಾಹ್ಮಿ ಸಿ. ಎಮ್., ಉಪನಾಯಕಿಯಾಗಿ ಅವನಿ ಅವರೊಂದಿಗೆ ಮಂತ್ರಿಮoಡಲದ ಎಲ್ಲಾ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮಂತ್ರಿ ಮಂಡಲದ ಸದಸ್ಯರಿಗೆ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಇವರ ಮಾರ್ಗದರ್ಶನದಲ್ಲಿ ಚುನಾವಣಾ ಸಮಿತಿಯ ಶಿಕ್ಷಕ ಸದಸ್ಯರ ಸಹಯೋಗದೊಂದಿಗೆ ಪದಗ್ರಹಣ ಸಮಾರಂಭ ಸಂಪನ್ನಗೊoಡಿತು. ಪ್ರೌಢ ಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪ್ರಾಥಮಿಕ ಶಾಲಾ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲತಾ ಜಿ. ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಪಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.